Friday, August 22, 2014

ಬುದ್ದಿಜೀವಿಗಳು V/S ಸಾಮಾನ್ಯ ಜನರು

ಐದು ಜನ ಬುದ್ದಿಜೀವಿಗಳು ಮತ್ತು ಐದು ಜನ ಸಾಮಾನ್ಯ ಜನರು ಒಟ್ಟಿಗೆ ಬೆಂಗಳೂರಿನಿಂದ ಮುಂಬೈಗೆ ಯಾವುದೋ ಸಮಾರಂಬಕ್ಕೆ ಹೊರಡುತ್ತಾರೆ.

ಎಲ್ಲರೂ ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ಅಲ್ಲಿ ಒಟ್ಟಿಗೆ ಸೇರ್ತಾರೆ.

ಎರಡೂ ಪಂಗಡಗಳೂ ತಾವು ಹೆಚ್ಚು ಬುದ್ದಿವಂತರು ಅನ್ನೋದನ್ನ ತೋರಿಸ್ಕೋಬೇಕು ಅಂತ ಮೊದಲೇ ನಿರ್ಧರಿಸಿರುತ್ತಾರೆ.

ಹಂತ - ೧ (ಬೆಂಗಳೂರ್ - ಬೆಳಗಾವಿ)

ಅವರಿಗೆ ಡೈರೆಕ್ಟ್ ಮುಂಬೈ ರೈಲ್ ನಲ್ಲಿ ಟಿಕೆಟ್ ಸಿಗದ ಕಾರಣ ಬೆಳಗಾವಿವರೆಗೆ ಹೋಗಿ ನಂತರ ಮುಂದಿನ ರೈಲ್ ನಲ್ಲಿ ಮುಂಬೈಗೆ ಹೋಗೋದು ಅಂತ  ತೀರ್ಮಾನಿಸುತ್ತಾರೆ.

ಸಾಮಾನ್ಯ ಜನರು ಒಂದೇ ಟಿಕೆಟ್ ತಗೋತಾರೆ, ಬುದ್ದಿಜೀವಿಗಳು ಐದು ಟಿಕೆಟ್ ತಗೋತಾರೆ, ಹಾಗೆ ಟಿ ಸಿ ಬರುವುದನ್ನೇ ಕಾಯ್ತಾ ಇರ್ತಾರೆ ಬುದ್ದಿ ಜೀವಿಗಳು.

ಟಿ ಸಿ ಬರುವುದನ್ನು ದೂರದಿಂದ ನೋಡಿದ ಸಾಮಾನ್ಯ ಜನರು ಸೀದಾ ಒಟ್ಟಿಗೆ ಒಂದೇ ಟಾಯ್ಲೆಟ್ ಒಳಗೆ ಹೋಗಿ ಸೇರಿಕೊಳ್ತಾರೆ. ಟಿ ಸಿ ಹೋಗಿ ಟಾಯ್ಲೆಟ್ ಬಾಗಿಲು ಬಡಿಯುತ್ತಾನೆ. ಒಂದು ಕೈ ಟಿಕೆಟ್ ಜೊತೆಗೆ ಹೊರಗೆ ಬರತ್ತೆ ಟಿಸಿ ಚೆಕ್ ಮಾಡಿ ಹೊರಡ್ತಾನೆ.


ಹಂತ - ೨ (ಬೆಳಗಾವಿ - ಮುಂಬೈ)

ಬುದ್ದಿಜೀವಿಗಳು ಈ ಭಾರಿ ನಾವು ಹೆಚ್ಚು ಬುದ್ದಿವಂತರು ಅಂತ ತೋರಿಸಿ ಕೊಳ್ಳಲೇಬೇಕು ಅಂತ ನಿರ್ಧರಿಸ್ತಾರೆ.
ಈಗ ಬುದ್ದಿಜೀವಿಗಳು ಒಂದು ಟಿಕೆಟ್ ತಗೋತಾರೆ. ಸಾಮಾನ್ಯ ಜನರು ಒಂದೂ ಟಿಕೆಟ್ ತಗೊಳೋದೇ ಇಲ್ಲ.
ಟಿಸಿ ಬರ್ತಾ ಇದಾನೆ...

ಎಲ್ಲ ಬುದ್ದಿಜೀವಿಗಳೂ ಒಂದು ಟಾಯ್ಲೆಟ್ ಸೇರ್ಕೊತಾರೆ. ಎಲ್ಲ ಸಾಮಾನ್ಯ ಜನರು ಎದುರಿನ ಟಾಯ್ಲೆಟ್ ಸೇರ್ಕೊತಾರೆ.
ಒಬ್ಬ ಸಾಮಾನ್ಯ ಜನ  ಟಾಯ್ಲೆಟ್ ಇಂದ ಹೊರಗೆ ಬಂದು ಬುದ್ದಿಜೀವಿಗಳ ಟಾಯ್ಲೆಟ್ ಬಾಗಿಲು ಬಡೀತಾನೆ. ಒಂದು ಕೈ ಟಿಕೆಟ್ ಜೊತೆ ಹೊರಗೆ ಬರತ್ತೆ. ಸಾಮಾನ್ಯ ಜನ ಟಿಕೆಟ್ ತಗೊಂಡು ಟಾಯ್ಲೆಟ್ ಒಳಗೆ ಬೇಗ ಸೇರ್ಕೊತಾನೆ. ಟಿ ಸಿ ಹೋಗಿ ಟಾಯ್ಲೆಟ್ ಬಾಗಿಲು ಬಡಿಯುತ್ತಾನೆ. ಒಂದು ಕೈ ಟಿಕೆಟ್ ಜೊತೆಗೆ ಹೊರಗೆ ಬರತ್ತೆ ಟಿಸಿ ಚೆಕ್ ಮಾಡ್ತಾನೆ. ನಂತರ ಬುದ್ದಿಜೀವಿಗಳ ಟಾಯ್ಲೆಟ್ ಡೋರ್ ಬಡೀತಾನೆ ಟಿಕೆಟ್ ಇಲ್ಲ ಅಂತ ಡೋರ್ ಓಪನ್ ಮಾಡಿಸ್ತಾನೆ. ಅಷ್ಟೂ  ಬುದ್ದಿಜೇವಿಗಳನ್ನೂ ಹೊರಗೆಳೆದು ಹತ್ತು ಪಟ್ಟು ಫೈನ್ ಹಾಕುತ್ತಾನೆ.

ಹಂತ - ೩ (ಮುಂಬೈ)

ಈಗ ಎಲ್ಲರೂ ಮುಂಬೈ ಹೇಗೋ ಕಷ್ಟಪಟ್ಟು ಸೇರಿದ್ದಾರೆ.  ಬುದ್ದಿಜೀವಿಗಳಿಗೆ ಈಗ ಇದು ಕೊನೇ ಅವಕಾಶ ಏನಾದ್ರೂ ಮಾಡಿ ಈ ಸರಿ ಸಾಮಾನ್ಯ ಜನಗಳನ್ನ ಸೋಲಿಸಿಯೇ ಸಿದ್ಧ ಅಂತ ನಿರ್ಧರಿಸುತ್ತಾರೆ. ಎಲ್ಲರೂ ಮುಂಬೈ ಲೋಕಲ್ ಟ್ರೈನ್ ಟಿಕೆಟ್ ಗೋಸ್ಕರ ಕ್ಯೂ ನಿಲ್ತಾರೆ.

ಬುದ್ದಿಜೀವಿಗಳು ಒಂದೇ ಟಿಕೆಟ್ ಟ್ರಿಕ್ ಮಾಡೋಣ ಅಂತ ನಿರ್ಧರಿಸಿ ಒಂದೇ ಟಿಕೆಟ್ ತಗೋತಾರೆ. ಸಾಮಾನ್ಯ ಜನರು ಐದು ಟಿಕೆಟ್ ತಗೋತಾರೆ.

ಟಿಸಿ ಬರ್ತಾನೆ, ಸಾಮಾನ್ಯ ಜನರು ಟಿಕೆಟ್ ತೋರಿಸ್ತಾರೆ. ಬುದ್ದಿಜೀವಿಗಳು ಟಾಯ್ಲೆಟ್ ಗಾಗಿ ಹುಡುಕ್ತಾನೆ ಇದಾರೆ "ಲೋಕಲ್ ಟ್ರೈನ್"ನಲ್ಲಿ !!!

ಸಾರಾಂಶ: ಬುದ್ದಿಜೀವಿಗಳಿಗೂ ಬುದ್ದಿವಂತಿಕೆಗೂ ವ್ಯತ್ಯಾಸವಿದೆ.
 

Thursday, August 21, 2014

Chako the Pilot

ಚಾಕೋ ಒಬ್ಬ ವಿಮಾನದ ಕ್ಲೀನರ್. ಪ್ರತಿ ದಿನದಂತೆ ಒಂದು ದಿನ ವಿಮಾನದ ಕಾಕ್ ಪಿಟ್ (cockpit) ಕ್ಲೀನ್ ಮಾಡ್ತಾ ಇರಬೇಕಾದ್ರೆ "ವಿಮಾನ ಚಲಾಯಿಸುವ ವಿಧಾನ (for beginners) - volume 1" ಅನ್ನುವ ಪುಸ್ತಕ ಕಾಣಿಸುತ್ತೆ.
ಅವನು ಪುಸ್ತಕ ತೆರೆದು ಮೊದಲನೇ ಪುಟ ನೋಡ್ತಾನೆ ಅಲ್ಲಿ "ಇಂಜಿನ್ ಸ್ಟಾರ್ಟ್ ಮಾಡಲು ಕೆಂಪು ಗುಂಡಿ ಒತ್ತಿರಿ" ಅಂತ ಬರೆದಿರುತ್ತೆ. ಚಾಕೋ ಏನಾದರಾಗಲಿ ಅಂತ ಒತ್ತಿಯೇ ಬಿಡ್ತಾನೆ, ವಿಮಾನ ಸ್ಟಾರ್ಟ್ ಆಗಿ ಬಿಡತ್ತೆ. ಅವನಿಗೆ ಫುಲ್ ಕುಶಿ ಆಗಿ ಸರಿ ಅಂತ ಎರಡನೇ ಪುಟ ನೋಡ್ತಾನೆ ಅಲ್ಲಿ ವಿಮಾನ ಚಲಾಯಿಸಲು ನೀಲಿ ಗುಂಡಿಯನ್ನು ಒತ್ತಿ ಅಂತ ಬರೆದಿರತ್ತೆ ಇವ್ನು ನೀಲಿ ಗುಂಡಿ ಒತ್ತುತ್ತಾನೆ. ವಿಮಾನ ನಿದಾನಕ್ಕೆ ಹೊರಟು ಜೋರಾಗಿ ಓಡೋಲು ಶುರು ಮಾಡತ್ತೆ.
ಅವನಿಗೆ ವಿಮಾನವನ್ನ ಮೇಲೆ ಯಾಕೆ ಹಾರಿಸಬಾರದು ಅನ್ನಿಸುತ್ತೆ. ಪುಸ್ತಕದ ಮೂರನೆ ಪುಟ ತಿರುಗಿಸಿ ನೋಡುತ್ತಾನೆ. ಅಲ್ಲಿ ಹೀಗೆ ಬರೆದಿರತ್ತೆ "ವಿಮಾನವನ್ನು ಹಾರಿಸಲು ದಯವಿಟ್ಟು ಹಸಿರು ಗುಂಡಿಯನ್ನು ಓತ್ತಿ" ಚಾಕೋ ಕೂಡಲೇ ಹಸಿರು ಗುಂಡಿ ಒತ್ತುತ್ತಾನೆ ಮತ್ತು ವಿಮಾನ ಹಾರೋಕೆ ಶುರು ಆಗತ್ತೆ.
ಅವನಿಗೆ ವರ್ಣಿಸಲಾರದಷ್ಟು ಸಂತೋಷ ಆಗತ್ತೆ...ಒಂದು ಇಪ್ಪತ್ತು ನಿಮಿಷ ಹಾರಾಟ ಆದ್ಮೇಲೆ ಸಾಕು ಇನ್ನು ವಾಪಾಸ್ ಲ್ಯಾಂಡ್ ಮಾಡೋಣ ಅಂತ ಯೋಚಿಸ್ತಾ ಮುಂದಿನ ಪುಟ ತಿರುಗಿಸುತ್ತಾನೆ.
ಅಲ್ಲಿ ಬರೆದಿದ್ದನ್ನ ಓದಿದ ಕೂಡಲೇ ಮೂರ್ಚೆ ತಪ್ಪಿ ಬಿದ್ದು ಬಿಡ್ತಾನೆ...
ಅಲ್ಲಿ "ವಿಮಾನವನ್ನು ಲ್ಯಾಂಡ್ ಮಾಡುವ ವಿದಾನವನ್ನು ಕಲಿಯಲು ಹತ್ತಿರದ ಪುಸ್ತಕದ ಅಂಗಡಿಯಿಂದ volume 2 ಅನ್ನು ಖರೀದಿಸಿರಿ" ಅಂತ ಬರೆದಿತ್ತು.

Wednesday, August 20, 2014

ಕೋತಿಗಳು ಸಾರ್ ಕೋತಿಗಳು

ಒಂದು ಹಳ್ಳಿಲಿ ಒಬ್ಬ ವ್ಯಾಪಾರಿ ನಾನು ಹತ್ತು ರುಪಾಯಿಗೆ ಕೋತಿಗಳನ್ನು ಕೊಂಡು ಕೊಳ್ಳುತ್ತೇನೆ ಅಂತ ಊರು ತುಂಬಾ ಪೋಸ್ಟರ್ ಹಾಕಿದ.
ಊರಿನ ಜನಗಳು ಎಲ್ಲ ಒಳ್ಳೆ ಐಡಿಯಾ ಹೇಗೂ ಊರು ಸುತ್ತ ಮುತ್ತ ಬೇಜಾನ್ ಕೋತಿಗಳು ಇದಾವೆ ಹಿಡಿದು ಕೊಡೋಣ ಅಂತ ಪ್ಲಾನ್ ಮಾಡ್ತಾರೆ.
ಸರಿ ಒಂದು ವಾರ ಅಗೊದ್ರೊಳಗೆ ಹತ್ತಿರ ಹತ್ತಿರ ೧೦೦೦ ಕೋತಿಗಳು ತಂದು ಕೊಡ್ತಾರೆ. ಹಾಗೆ ಕೋತಿಗಳು ಸಿಕ್ಕೋದು ಕಡಿಮೆ ಆಗಿ ತಂದು ಕೊಡೋವ್ರು ಕಡಿಮೆ ಆಗ್ತಾರೆ. ಮುಂದಿನ ವಾರ ಅವ್ನು ಮತ್ತೆ ಕೋತಿ ರೇಟು ಇಪ್ಪತ್ತು ರುಪಾಯಿ ಅಂತ ಇನ್ನೊಂದು ಪೋಸ್ಟರ್ ಹಾಕಿಸ್ತಾನೆ. ಮತ್ತೆ ಜನಗಳು ಪಕ್ಕದ ಊರುಗಳಿಗೂ ದಟ್ಟ ಕಾಡುಗಳಿಗೂ ಹೋಗಿ ಕೋತಿ ಹಿಡಿದು ತಂದು ಕೊಡಲಾರಂಬಿಸುತ್ತಾರೆ. ಹತ್ತು ದಿನ ಕಳೀತು ಮತ್ತೆ ಕೋತಿ ತಂದು ಕೊಡುವವರ ಸಂಖ್ಯೆ ಕಡಿಮೆ ಆಗಿ, ಹಾಗೆ ನಿಂತೇ ಹೋಗತ್ತೆ. ಜನಗಳು ತಮ್ಮ ತಮ್ಮ ಹಳೆಯ ಕೆಲಸಗಳನ್ನು ಶುರು ಮಾಡುತ್ತಾರೆ.
ಆದರೂ ಈ ವ್ಯಾಪಾರಿ ಆಫರ್ ನ ೨೫ ರೂಪಾಯಿಗೆ ಏರಿಸ್ತಾನೆ. ಕೋತಿ ಹಿಡಿಯೋದು ಮತ್ತು ತಂದು ಕೊಡೋದು ತುಂಬ ದುಸ್ತರವಾಗಿ ಕೋತಿಗಳನ್ನ ಎಲ್ಲೂ ಸುತ್ತ ಮುತ್ತ ಹಳ್ಳಿಗಳಲ್ಲಿ/ಕಾಡುಗಳಲ್ಲಿ ನೋಡೋದೇ ಕಷ್ಟವಾಗಿಬಿಡುತ್ತೆ.
ಈಗ ವ್ಯಾಪಾರಿ ೫೦ ರೂಪಾಯಿಗೆ ಕೋತಿಗಳನ್ನ ತಗೋತೀನಿ ಅಂತ ಡಂಗುರ ಸಾರಿಸ್ತಾನೆ.
ಯಾವುದೋ ಅರ್ಜೆಂಟ್ ಕೆಲಸದ ನಿಮಿತ್ತ ಅವನು ಬೇರೆ ಊರಿಗೆ ಹೋಗಬೇಕಾಗಿ ಬರತ್ತೆ. ಅವನ ಬದಲಿಗೆ ಒಬ್ಬ ಹುಡುಗನ್ನ ಬಿಟ್ಟು ವ್ಯಾಪಾರ ಮಾಡೋಕೆ ಹೇಳಿ ಹೋಗ್ತಾನೆ.
ವ್ಯಾಪಾರಿ ಊರಲ್ಲಿ ಇಲ್ಲದ ಸಮಯದಲ್ಲಿ ಊರಿನ ಜನಗಳನ್ನ ಕರೆದು ನೋಡಿ ಇಲ್ಲಿ ಎಷ್ಟೊಂದು ಕೋತಿಗಳು ಹಿಡಿದಿಟ್ಟು ಕೊಂಡಿದಾನೆ. ನಾನು ನಿಮಗೆ ಇವುಗಳನ್ನ ೩೫ ರೂಪಾಯಿಗೆ ಕೊಡುತ್ತೇನೆ. ವ್ಯಾಪಾರಿ ವಾಪಾಸ್ ಬಂದ ಕೂಡಲೇ ಅವನಿಗೆ ೫೦ ರೂಪಾಯಿಗೆ ಕೊಟ್ಟುಬಿಡಿ ಅಂತ ಹೇಳುತ್ತಾನೆ. ಊರಿನ ಜನರು ಎಲ್ಲ ಇದ್ದ ಬದ್ದ ದುಡ್ಡನ್ನೆಲ್ಲ ತಂದು ಅವರವರ ಹತ್ತಿರ ಆದಷ್ಟು ಕೋತಿಗಳನ್ನ ಕೊಂಡು ಕೊಳ್ಳುತ್ತಾರೆ. ಎಲ್ಲ ಕೋತಿಗಳೂ ಮಾರಾಟವಾಗುತ್ತವೆ.
ಅದಾದ ನಂತರ ಆ ವ್ಯಾಪಾರಿ ಆಗಲಿ ಅಥವಾ ಅವನ ಅಸಿಸ್ಟಂಟ್ ಆಗಲಿ ಆ ಊರಿನ ಬಳಿ ಎಂದೂ ಕಾಣಿಸಿ ಕೊಳ್ಳೋದೇ ಇಲ್ಲಾ... ಬರೀ ಕೋತಿಗಳೇ ಊರಿನ ತುಂಬೆಲ್ಲಾ...
ಹ್ಹ ಹ್ಹ ಹ್ಹ.... ಸ್ಟಾಕ್ ಮಾರ್ಕೆಟಿಗೆ ಸ್ವಾಗತ ಮಾರ್ರೆ ...

Wednesday, August 13, 2014

ಹೊಡೆಸಬೇಕಿದೆ ಔಷಧಿ

ಬಿಡುವಿಲ್ಲದ ಮಳೆಯ
ನಡುವೆ ಬಿಸಿಲಿಗೆ ಕಾದು
ಯಾವ ಪುರುಷಾರ್ಥಕ್ಕಾಗಿ
ಗೊತ್ತಿಲ್ಲದಿದ್ದರೂ
ಹಳದಿ ರೋಗದ ನಡುವೆ
ಅಳಿದುಳಿದ ತೋಟಕೆ
ಹೊಡೆಸಬೇಕಿದೆ ಔಷಧಿ

ತಾನು ಬೆಳೆಸಿದ ತೋಟ
ನೋಡಿಕೊಳ್ಳುವವರಿಲ್ಲ
ಎಂಬ ಬೇಸರವಿದ್ದರೂ
ಇದ್ದೊಬ್ಬ ಮಗ ಓದಿ
ದೇಶಬಿಟ್ಟು ಹೋಗಿದ್ದರೂ
ಮನದ ಬೇಸರ ತೋರಿಸಿಕೊಳ್ಳದೆ
ಹೆಮ್ಮೆಯಿಂದ ಬೀಗ ಬೇಕಿದೆ

ಅರವತ್ತೈದಾದರು
ನೋಡಿಕೊಳ್ಳುವವರಿಲ್ಲ
ಅಕ್ಕ ಪಕ್ಕದ ಮನೆಯವರು
ಆಡುವುದು ತಪ್ಪುವುದಿಲ್ಲ
ಮಗ ವಿದೇಶದಲ್ಲಿದ್ದರೂ
ನೋಡು ಆಸೆ ಮುದುಕನಿಗೆ
ತೆಪ್ಪಗೆ ಕುಳಿತು ಜಮೀನು
ಕೊಟ್ಟು ಹೋಗಬಾರದೇ ಮಗನೊಟ್ಟಿಗೆ

ಮನಸ್ಸಿಗೇನೋ ಆಸೆಯಿದೆ
ಮೊಮ್ಮಕ್ಕಳೊಂದಿಗೆ ಕಾಲ ಕಳೆಯಲು
ಸೊಸೆಯ ಮಾತುಗಳ ನೆನೆದೊಡನೆ
ಮನಸ್ಸಿಗೇನೋ ತಳಮಳ
ಮುದುಕ ಮುದಿಕಿ
ಕೈ ಕಾಲು ಗಟ್ಟಿ ಇದ್ದಷ್ಟು ದಿನ
ಇಲ್ಲೇ ಕಳೆದರೆ ಒಳ್ಳೆಯದು ಮನಸ್ಸಿಗೆ