Wednesday, June 25, 2014

ಮಳೆಗಾಲಕ್ಕೆ ಮುನ್ನುಡಿ

ಚಪ್ಪರ ತೆಗೆದು ಸಾರ ಹಾಕಿ
ಸೋಗೆ ಎಳೆದು ಅಟ್ಲುಮಾಡಿ
ಹಾಳೆ ಕಡಿದು ಅಟ್ಟಕ್ಕೆ ಹಾಕಿ
ಸೌದೆ ಕಡಿದು ಕೊಟ್ಟಿಗೆಲಿ ಕೂಡಿ
ಮುಳ್ಳು ತಂದು ಬೇಲಿ ಕಟ್ಟಿ
ಮಾವಿನಮಿಡಿ ಕುಯ್ದು ಉಪ್ಪಿಗ್ ಹಾಕಿ
ಹಲಸಿನ್ಕಾಯಿ ತಂದು ಹಪ್ಳ ಮಾಡಿ
ಸೌತೆಕಾಯಿ ಕುಯ್ದು ಮಾಡಿಗೆ ಕಟ್ಟಿ
ಬತ್ತ ತಂದು ಕಣಜಕ್ಕೆ ಹಾಕಿ
ಅಕ್ಕಿ ಮಾಡ್ಸಿ ಪಣತಕ್ಕೆ ತುಂಬಿ
ಬೆಲ್ಲ ತಂದು ಡಬ್ಬಿಗೆ ಹಾಕಿ
ಕಂಬಳಿ ತಂದು ಕೆಲ್ಸದವ್ರಿಗೆ ಹಂಚಿ
ಹೂಟಿ ಮಾಡಿ ಬೀಜ ಹಾಕಿ
ಹರ್ದೋದ್ ಕೊಡೆಗೆ ಕಡ್ಡಿ ಹಾಕ್ಸಿ
ಹಾಸ್ಗೆ ಒಣಗ್ಸಿ ಪತ್ತಾಸಲ್ಲಿ ತುರ್ಕಿ
ಮಾಡು ಬಿಚ್ಚಿ ಕ್ಲೀನ್ ಮಾಡ್ಸಿ
ಸೋರ್ತಾ ಇದ್ರೆ ಹಾಳೇಕಡ್ಡಿ ಸೇರ್ಸಿ
ಅಡ್ಕೆಮರಕಡ್ದು ಮಾಡಿಗ್ ದೋಣಿ ಮಾಡಿ
ಎಲ್ಲ ಮುಗ್ಸಿ ಮಳೆಗೆ ಕಾಯಿರಿ




ಹಣ ನಿಮ್ಮದು, ಜಾಗ ನಿಮ್ಮದು
ನಾವ್ ಕಟ್ಟಿ ಮುಗಿಸಿದ ಮನೆ ನಿಮ್ಮದು
ಬಿಟ್ಟು ಕೊಟ್ಟು ಹೊರಟಿಹೆವು ನಾವು
ಇನ್ನೊಬ್ಬರಿಗೆ ಕಟ್ಟಲು ಹೊಸ ಸೂರನು

ವರ್ಷಕ್ಕೊಂದು ಮನೆ ಕಟ್ಟುವೆವು ನಾವು
ನಮಗಿಲ್ಲ ನಮ್ಮದೇ ಆದ ನೆಲೆಯು
ಊರೂರ ಸುತ್ತಿಸುವನು ಅವನು
ಅವನಿಗಿಲ್ಲೆಮ್ಮ ಮೇಲೆ ಕರುಣೆಯು

------------<>------------

ಬಲ್ಯದಾ ನೆನಪುಗಳ
ಬುತ್ತಿಯಾ ಕಟ್ಟಿ ಕೊಂಡು
ಹುಟ್ಟೂರಿನಾ ಋಣವ ತೀರಿಸಿ
ಹೊರಟಿಹೆವು ನಾವು

ಹೊಸ ಜೀವನದ ಆಸೆ
ಹೊಸ ಕನಸ ಹೊತ್ತು
ಸಾಗಿಹುದು ಬಂಡಿ
ಹೊಸ ಊರಿಗೆ




(ಚಿತ್ರ: 3K - ಕನ್ನಡ ಕವಿತೆ ಕಥನ)

Wednesday, June 18, 2014

ಶಾಮರಾಯರ ಮಗನು ಅಣ್ಣತಂಗಿಯಿಲ್ಲದ ಹುಡುಗ ಚಿನ್ನದಂತಹ ಹುಡುಗ ಊರಿಗೆಲ್ಲ
ಬಿಎಸ್ಸಿ ಎಂಎಸ್ಸಿ ಹೆಸರು ಸೀತಾರಾಮು ಮೂವತ್ತೈದು ತುಂಬಿಹುದು ಲಗ್ನವಿಲ್ಲ

ಅಣ್ಣತಂಗಿಯರಿಲ್ಲದ ಗಂಡು ಒಂಟಿಸಲಗವೋ ಗಂಡು ಹೆಣ್ಮಕ್ಳ ಕಣ್ಣಲ್ಲೇ ಕೊಲ್ಲುವವನು
ಮಡದಿಯನು ಕರೆತಂದು ಊಟ ಹಾಕಿಸುವನೆಂದು ಕಾದವರ ಸಾಲಲ್ಲಿ ನಮ್ಮ ಕನಸು
ಹತ್ತಿರದ ಹೊಳೆಯಲ್ಲಿ ಎತ್ತ ಮೈ ತೊಳೆಸಿ ಹೊಡಕೊಂಡು ಬರುವಾಗ ನೋಡಬೇಕು
ದನವನೋಡಿಸುವಾಗ ನಾಗರ ಬನದಬಳಿ ಅವನ ಹೆಂಡತಿ ಹೆಸರ ಕೇಳಬೇಕು

ಮೊನ್ನೆ ರಾಮಾಪುರದ ಶಂಕ್ರಯ್ಯನ ಮೊಮ್ಮಗಳ ನೋಡಲು ಹೋದ ಅವರ ಮನೆಗೆ
ರೈತರ ಮನೆಗಳಲಿ ಕೆಲಸ ಜಾಸ್ತಿಯಿರುವುದು ನೋ ಎಂದಳು ಹುಡುಗಿ ರೂಮಿನೊಳಗೆ 
ಅವಳ ಮಾತನು ಕೇಳಿ ಬೇಸರಿಸಿಕೊಂಡನು ರಾಮು ಹೃದಯದಲಿ ಆಸೆ ಕಮರಿ ಹೋಗಿ
ಮುಂಜಾನೆ ಟೀವಿಯಲಿ ನುಡಿದುದು ಭವಿಷ್ಯ ಮಾಡವುದೇನು ಹೊರಟನು ಮನೆಗೆ ಹಿಂತಿರುಗಿ

ಸಂಜೆ ಅಂಗಡಿಯಲಿ ನನ್ನ ತಮ್ಮನ ಬಳಿ ಮಾಣಿ ಹೇಳಿದನಂತೆ ಕಾರಣವನು
ಸಾಫ್ಟ್ ವೇರ್ ಕಂಪನಿಯಲಿ ಕೆಲಸ ಮಾಡುವ ಹುಡ್ಗ ಅವಳಿಗೆ ಪ್ರೀತಿ ಎಂದು 
ಕುಡಿತ ಸಿಗರೇಟು ಪಾನ್ ಅಭ್ಯಾಸವಿಲ್ಲದ ಹುಡುಗನನು ಬಿಟ್ಟಿದ್ದೇಕೆ ಆ ಪೆದ್ದು ಹೆಣ್ಣು
ಬೆಂಗಳೂರ ಕಿಷ್ಕಿಂದೆಯ ಮನೆಗಳೇ ಹೇಳುವುವು ಅಲ್ಲಿ ಜಾಸ್ತಿದಿನ ನೀರುಸಿಕ್ಕುವುದಿಲ್ಲ ಎಂದು

ಶಾಮರಾಯರ ಮಗನು ಚಿನ್ನದಂತಹ ಹುಡುಗ ಹುಡುಗಿ ಸಿಕ್ಕದಿದ್ದರೂ ಕಷ್ಟವಿಲ್ಲ
ದಾವಣಗೆರೆಯ ಹೆಣ್ಣು ಕೊಡಿಸಿದರೂ ತುಂಬಿಸುವನಂತೆ ಜೇಬು ಯಾವ್ದೇ ಮುಚ್ಚು ಮರೆಯಿಲ್ಲ

(ಕೆ.ಎಸ್. ನರಸಿಂಹಸ್ವಾಮಿಯವರ ಕ್ಷಮೆ ಕೋರುತ್ತಾ) 

Friday, June 13, 2014

ದಿನಚರಿ

ಬೆಳಗೆದ್ದು ಒಂದು ಸುತ್ತು
ಹೋಗುವ ಬನ್ನಿ ಪಾರ್ಕಿಗೆ...
ಅಲ್ಲಿ ಎಲ್ಲರೂ ಇಹರು
ಚಿಕ್ಕವರು, ದೊಡ್ಡವರು
ನಡೆಯುವವರು, ಓಡುವವರು
ಕದ್ದುಕದ್ದು ಅವರಿವರ ನೋಡುವವರು
ಕಣ್ಣಲ್ಲೇ ಪ್ರೀತಿಯ ಮಾಡುವವರು
ಗೇಟಿನಲೇ ಹೂ ತರಕಾರಿ ಮಾರುವವರು
ಮನೆಗೆ ಹಿಂತಿರುಗುವಾಗ
ಹಾಲು ಪೇಪರ್ ಕೊಳ್ಳುವ
ಚಿಲ್ಲರೆ ಇಲ್ಲವೆಂದು ಅವ ಕೊಡುವ
ಚಾಕಲೇಟ್ ಬೇಸರದಿ ಕಿಸೆಯಲಿ ಇಳಿಸುವ
ಪಕ್ಕದ ಮನೆಯವರು ಸಿಕ್ಕಿದರೆ
ಒಂದು ಮೇಲು ನಗೆಯ ಬೀರುವ
ಒಳಗೊಳಗೇ ನನ್ಮಗ ಗಾಡಿಯ
ದಾರಿಗೆ ಅಡ್ಡ ಇಟ್ಟಿರುವನೆಂದು ಮನದಲ್ಲೇ ಶಪಿಸುತ್ತ
ಕಾಫಿ ಕುಡಿದು ಸ್ನಾನ ಮಾಡಿ
ಗಡಿಬಿಡಿಯಲಿ ತಿಂಡಿ ತಿನ್ನುವಷ್ಟರಲ್ಲಿ ಗಂಟೆ ಒಂಬತ್ತು
ಹೊರಟು ಗಾಡಿಯಲಿ ಅಡ್ಡಬಂದವರ ಬಯ್ಯುತ್ತಾ
ಆಫೀಸು ಸೇರುವಷ್ಟರಲ್ಲಿ ನೆನಪಾಗುವುದು
ಊಟದ ಡಬ್ಬ ಮನೆಯಲೇ ಬಿಟ್ಟಿರುವೆನೆಂದು
ಆಷ್ಟೂ ಕೆಲಸವ ಒಂದೇ ಉಸಿರಿನಲಿ ಮುಗಿಸುವವನಂತೆ ಆಡುವ
ಹ್ಯಾಂಗಾಗುವ ಕಂಪ್ಯೂಟರ್ ಗೆ ಎರಡು ಏಟನ್ನು ಹಾಕುತ
ತಲೆಕೆಟ್ಟು ಸ್ನೇಹಿತರೊಟ್ಟಿಗೆ ಸಿಕ್ಕ ಹೋಟೆಲ್ಗೆ ಹೋಗುವ
ಅವ ಹಾಗೆ ಇವ ಹೀಗೆ ಬಾಸ್ ನ ಗೇಲಿ ಮಾಡುವ
ಆಡ್ಡ ಹಾಕೋ ಪೋಲಿಸ್ ಕೈಲಿ ಅಷ್ಟೋ ಇಷ್ಟೋ ತುರುಕುತಾ
ಪೆಟ್ರೋಲ್ ಇಲ್ದೆ ಕಷ್ಟಪಟ್ಟು ಗಾಡಿನನ್ನು ತಳ್ಳುತಾ
ಮದ್ಯರಾತ್ರಿ ಮನೆಯನಂತು ಸೇರುವ
ಟಿವಿ ನೋಡುತ ಮಲಗಿ ಇಷ್ಟಪಡುವ ಹೀರೋಯಿನ್ ನೆನೆಯುತಾ
ಇನ್ನೇನು ಕಣ್ಮುಚ್ಚಿ ನಿದ್ರಿಸುವಷ್ಟರಲೇ
ಟ್ರಿಣ್ ಟ್ರಿಣ್ ಟ್ರಿಣ್ ಅಲಾರಂ...

Tuesday, June 10, 2014

ನಾ ಹೇಗೆ ಮರೆಯಲಿ ಆ ದಿನಗಳ



ನಾ ಹೇಗೆ ಮರೆಯಲಿ
ಬೆಳಗಿನಾ ಜಾವದಲಿ
ಸುರಿಯುತ್ತಿದ್ದ ಮಳೆಯಲಿ
ಕೊಪ್ಪೆ ಹಾಕಿಕೊಂಡು
ಶಾಲೆಗೆ ಹೋಗುತ್ತಿದ್ದ ಆ ದಿನಗಳ

ನಾ ಹೇಗೆ ಮರೆಯಲಿ
ಕೆಸರು ದಾರಿಯಲಿ
ಗುಡ್ಡದ ಒಸರಿನಲಿ
ಚಪ್ಪಲಿಯ ಬಿಚ್ಚಿಕೊಂಡು
ಆಟವಾಡುತಿದ್ದ ಆ ದಿನಗಳ

ನಾ ಹೇಗೆ ಮರೆಯಲಿ
ಮಳೆಯ ಬಿಡುವಿನಲಿ,
ಮಾವು ಹಲಸುಗಳಲಿ
ಹೊಟ್ಟೆ ತುಂಬಿಸಿಕೊಂಡು
ತಿರುಗುತಿದ್ದ ಆ ದಿನಗಳ

ನಾ ಹೇಗೆ ಮರೆಯಲಿ
ಬಚ್ಚಲು ಒಲೆಯಲಿ
ಹೊಗೆದಟ್ಟಿ ಬೆಂಕಿಯಲಿ
ಹಲಸಿನಬೀಜ ಹಪ್ಪಳ ಸುಟ್ಟುಕೊಂಡು
ತಿನ್ನುತ್ತಿದ್ದ ಆ ದಿನಗಳ

Friday, June 6, 2014

ಬೇಸಾಯ

 
ಶುರವಾಗಲಿದೆ ಮಳೆಗಾಲ
ಶುರವಾಗಲಿದೆ ಬೇಸಾಯ 
ಬೆಳ್ಳಂ ಬೆಳಿಗ್ಗೆ ಐದಕ್ಕೆ ಎದ್ದು 
ಬಿಚ್ಚಿ ಎತ್ತಿನ ಹಗ್ಗ
ಹಾಕಿಕೊಂಡು ಹೆಗಲ ಮೇಲೆ ನೊಗ 
ಹೊರಟು ನಿಂತರೆ ಗದ್ದೆಗೆ 
ಕೆಂಪ ಎಡಕ್ಕೆ ಕೌಲ ಬಲಕ್ಕೆ
ಹೊಡೆದು ಹೊಳಕೆ ನಿಲ್ಲಿಸು ಹೊತ್ತಿಗೆ 
ಬಿಸಿ ಬಿಸಿ ಹಲಸಿನ ಹಣ್ಣಿನ ಕಡುಬು ಹೊಟ್ಟೆಗೆ
ಬೀಜ ಬಿತ್ತಿ, ನೀರು ಕಟ್ಟಿ,
ಅಂಚು ಕಡಿದು, ಬೇಲಿ ಹಾಕಿ,
ತಿಂಗಳು ಕಳೆದು ಸಸಿ ಕೀಳಿಸಿ
ನಾಗಿ, ಶಾರದ, ಕಮಲ ಗೌರಿಯರ ಕರೆಸಿ 
ನೆಟ್ಟಿ ಮಾಡಿ ಮುಗಿಸಿ
ಉಸಿರ ಬಿಡುವಷ್ಟರಲ್ಲಿ 
ಬಂತು ಕಳೆ ಕೀಳುವ ಸಮಯ
ದೋ ಎಂದು ಸುರಿವ ಮಳೆಯಲಿ 
ಜಾರು ಗುಡ್ಡದಲ್ಲಿ ಹೊತ್ತು ತಂದು 
ಗೊಬ್ಬರ ಹಾಕಿ ಬೆಳೆಸಿ ಮತ್ತೆ ಮಳೆಗೆ ಕಾದು
ಹುಳಕೆ ಔಷದಿ ಸ್ಪ್ರೆಯ್ ಮಾಡಿ
ಅಂತೂ ತೆನೆ ತುಂಬಿತು ಹಾಲು
ಅಷ್ಟರಲ್ಲಿ ಬರುವವು ಹಂದಿಯ ಹಿಂಡು
ಓಡಿಸಲು ಹಾಕಿಕೊಂಡು ಮಚ್ಚಿಗೆ ಕಾದು ರಾತ್ರಿಯೆಲ್ಲ
ಷ್ರಷ್ಟಿ ದಿನ ಪೂಜೆಮಾಡಿ ತಂದು
ಪಾಯಸದೊಂದಿಗೆ ಹೊಸತು ಊಟವ ಮಾಡಿ 
ಜೊತೆ ಜೊತೆಯಲ್ಲಿ ಬಂತು ನೋಡಿ ಹಬ್ಬಗಳ ಸಾಲು 
ಅತ್ತ ಗದ್ದೆಯಲಿ ಬೆಳೆದು ನಿಂತಿದೆ ಬತ್ತ
ಕರೆದು ನಾಲ್ಕಾರು ಆಳುಗಳ ಜೊತೆ 
ಕುಯಿಲು ಮಾಡಿ ತಂದು ಕಣದಲ್ಲಿ ಗೊಣಬೆ ಹಾಕಿ
ಒಕ್ಲಾಟ ಮಾಡಿ ಮುಗಿಸುವಷ್ಟರಲಿ
ಸಾಕೋ ಸಾಕು..

ಓ ಹೆಣ್ಣೇ ಬೀಳಬೇಡ ಹಟಕ್ಕೆ


ಓ ಹೆಣ್ಣೇ ಬೀಳಬೇಡ ಹಟಕ್ಕೆ
ಎಷ್ಟೇ ಹೇಳಿದರು ರಾಮ
ಕೇಳಲಿಲ್ಲ ಬರಬೇಡ ವನವಾಸಕ್ಕೆಂದು
ಹೊರಟು ನಿಂತಳು ಜೊತೆಯಲ್ಲೇ
ಕಷ್ಟದ ಅರಿವಿಲ್ಲದೇ ಅವಳಿಗೆ
ತೊರೆದು ಸುಖ ಸುಪ್ಪತ್ತಿಗೆಗಳ

ಬಿಡಲಿಲ್ಲ ಅಲ್ಲಿಯೂ ಹಿಡಿದಳು ರಚ್ಚೆ
ಬೇಕೆನಗೆ ಮಾಯಾಜಿಂಕೆ
ಕಾವಲಿಗಿದ್ದ ಲಕ್ಷ್ಮಣನನ್ನೂ
ಓಡಿಸಿದಳು ಅವನ ಮಾತೂ ಕೇಳದೆ
ಅಷ್ಟೂ ಸಾಲದೇ ದಾಟಿ ಹೊರಬಂದಳು
ಲಕ್ಷಣನು ಹಾಕಿದಾ ರೇಖೆಯ

ಹೊರಟನು ರಾಮ ಹುಡುಕಲು,
ಕೊಲ್ಲ ಬೇಕಾಯಿತು ವಾಲಿಯ ಅಡಗಿ ಮರದ ಹಿಂದೆ
ವಾನರರ ಜೊತೆಗೂಡಿ ಕಟ್ಟಿದನು ಸೇತುವೆ
ನಡೆಯಿತು ಯುದ್ಧ, ಆಯಿತು ಸಾವು ನೋವು
ಇಂದ್ರಜಿತು, ಕುಂಭಕರ್ಣ, ರಾವಣರ ಅಳಿವು
ಎಲ್ಲವೂ ನಡೆದದ್ದು ಒಂದು ಹೆಣ್ಣು ಮಾತು ಕೇಳದ್ದಿದ್ದರಿಂದಲ್ಲವೇ?
ಅಂದು ಸೀತೆ ಹಿಡಿಯದಿದ್ದರೆ ಪಟ್ಟು
ಇರುತಿತ್ತೆ ರಾಮನಿಗೆ ಇಷ್ಟೆಲ್ಲಾ ಕಷ್ಟ
ಬರುತ್ತಿತ್ತೆ ಪತ್ನಿ ಅನುಮಾನಿಸಿದ ಪಟ್ಟ

ಓ ಹೆಣ್ಣೇ ಬೀಳಬೇಡ ಹಟಕ್ಕೆ

Wednesday, June 4, 2014

ಮುಂಗಾರು















ಕಾದಿದ್ದ ಬೆಟ್ಟ ಗುಡ್ಡಗಳಿಗೆ
ಹೊಲಗದ್ದೆ ತೋಟಗಳಿಗೆ
ಹಸಿರ ಚಿಗುರಿಸಲು ಮತ್ತೆ
ಬರುತಲಿದೆ ಮುಂಗಾರು ನೋಡ

ಬಾಯಾರಿದ್ದ ಬಾವಿಗಳಿಗೆ
ಹಳ್ಳಕೊಳ್ಳ ಕೆರೆಗಳಿಗೆ
ನೀರ ಹರಿಸಲು ಮತ್ತೆ
ಬರುತಲಿದೆ ಮುಂಗಾರು ನೋಡ

ಹಸಿದಿದ್ದ ರೈತರಿಗೆ
ಪ್ರಾಣಿ ಪಕ್ಷಿ ಸಂಕುಲಗಳಿಗೆ
ಜೀವ ತುಂಬಲು ಮತ್ತೆ
ಬರುತಲಿದೆ ಮುಂಗಾರು ನೋಡ


 

Tuesday, June 3, 2014

ನಾವು 'ಕನ್ನಡಿ'ಗರು

ಎನ್ನ ತಂಬಿ ಎಪ್ಪಡಿ ಇರಕ್ಕೆ 
ಚೇಟ ಒರು ಛಾಯ 
ಬಾಬುಗಾರು ಎಪ್ಪಡು ವಚ್ಚಿಂದಿ
ಭಯ್ಯಾ ದೋ ಪಾನಿ ಏಕ ಮಸಾಲ
ಬ್ರದರ್ ಡು ಯು ಅಕ್ಸೆಪ್ಟ್ ಕಾರ್ಡ್ಸ್ 

ನೋಡಿ ಹೇಗೆ ಅವರವರ ಭಾಷೇಲಿ ಮಾತಾಡ್ತಿವಿ ಅಂತ ... ಇದಕ್ಕೆ ಕನ್ನಡಿ ತರ ಅವರವರ ಭಾಷೆ ಮಾತಾಡೋದಕ್ಕೆ ಇರಬೇಕು ನಮ್ಮನ್ನ ಕನ್ನಡಿಗರು ಅನ್ನೋದು.

ಹುಟ್ಟಿ ಬೆಳೆಯ ಬೇಕು ನಾನು

ಹುಟ್ಟಿ ಬೆಳೆಯ ಬೇಕು ನಾನು
ಈ ಬೆಟ್ಟ ಗುಡ್ಡಗಳಲ್ಲಿ 
ಕುದುರೆಮುಖ ನರಸಿಂಹ
ಪರ್ವತಗಳ ತಪ್ಪಲಿನಲ್ಲಿ
ಸೂರ್ಯಾಸ್ಥದ ಸೊಬಗಿನ 
ಆಗುಂಬೆಯಲ್ಲಿ 
ಮುಂದಿನ ಜನ್ಮವೊಂದಿದ್ದರೆ 

ಹುಟ್ಟಿ ಬೆಳೆಯ ಬೇಕು ನಾನು
ಈ ಪರಿಸರದಲ್ಲಿ 
ಹಲಸು, ಮಾವು, ಬೀಟೆ
ನಂದಿಗಳ ನೆರಳಿನಲ್ಲಿ
ಕಾಫಿ, ಅಡಿಕೆ, ತೆಂಗು
ಬಾಳೆಗಳ ತೋಟದಲ್ಲಿ
ಮುಂದಿನ ಜನ್ಮವೊಂದಿದ್ದರೆ

ಹುಟ್ಟಿ ಬೆಳೆಯ ಬೇಕು ನಾನು
ಈ ಮಲೆನಾಡಿನಲ್ಲಿ
ಶೃಂಗೇರಿ ಶಾರದಾ
ಮಾತೆಯ ಬೀಡಿನಲ್ಲಿ
ತುಂಗೆ ಭದ್ರೆಯರ
ತವರೂರಿನಲ್ಲಿ
ಮುಂದಿನ ಜನ್ಮವೊಂದಿದ್ದರೆ

ಒಂದಿಷ್ಟು ಟೈಮ್ ಪಾಸ್

ಕೈಗಳು ಚಾಚುತಿವೆ
ಮಳೆಹನಿಗಳಿಂದ ತುಂಬಿದ
ಎಲೆಗಳನು ಸ್ಪರ್ಶಿಸಲು.

ಕಾಲುಗಳು ಕೇಳುತಿದೆ
ಕೆಸರು ಗದ್ದೆಯಾ ...
ಅಂಚಿನಲ್ಲಿ ಓಡಾಡಲು.

ಕಣ್ಣುಗಳು ಮಿನುಗುತಿವೆ
ಗುಡ್ಡದ ನೀರಿನ ಝರಿಯ
ಸೌನ್ದರ್ಯವ ತುಂಬಿಕೊಳ್ಳಲು.

ಕಿವಿಗಳು ನಿಮಿರುತಿವೆ
ಮುಸ್ಸಂಜೆ ಬಿಬ್ಬರಿ
ಕೂಗುವಾ ಸದ್ದನಾಲಿಸಲು.

ಮೂಗು ಕಾತರಿಸುತಿದೆ
ಅಂಗಳದ ಕಸ್ತೂರಿ
ಮಲ್ಲಿಗೆಯ ಪರಿಮಳಕ್ಕಾಗಿ.

ನಾಲಿಗೆಯು ಕಾಯುತಿವೆ
ಹಲಸಿನ ಹಣ್ಣಿನ
ಬಿಸಿಬಿಸಿ ಮುಳುಕಕ್ಕಾಗಿ.
 
 
 












------------<>------------

 
ಅದೇನು ನಾಚಿಕೆಯೋ
ನಿನಗೆ ನಾನರಿಯೆ
ತುದಿ ಬೆರಳ ಒಂದು ಸ್ಪರ್ಶಕ್ಕೇ
ನಾಚಿ ಮುದುಡುವ ನೀನು
ಲಜ್ಜೆಯಲ್ಲಿ ನಲ್ಲೆಯನ್ನೇ
ಮೀರಿಸುವೆಯಲ್ಲೇ


------------<>------------

 
ಉಕ್ಕಿ ಹರಿವ ನದಿಗೆ
ಯಾವ ಹಂಗಿಲ್ಲ
ಕೊಂಡೊಯ್ಯುತ್ತದೆ
ತನ್ನೊಡಲಲ್ಲಿ ತುಬಿಕೊಂಡು
ಕಡ್ಡಿ ಕಸ ಕಲ್ಲು ಮಣ್ಣು

ಮುಗ್ಗರಿಸಿದ ಮೇಲೇ
ಅರಿವಾದದ್ದು ಅವನಿಗೆ
ಪ್ರೀತಿಯೊಂದು
ಹುಚ್ಚು ಹೊಳೆ ಎಂದು
 
 


------------<>------------

ಆಷಾಢದಿ
ಮೋಡದ ಮರೆಯಲಿ
ಭುವಿಯ ಕಾಣದೆ
ಒಂಟಿ ಚಂದ್ರನ  ಕಂಬನಿ

------------<>------------

ಪಕ್ಕದೂರಿನಿಂದ
ಕದ್ದು ತಂದ ಗಿಡಕೆ
ಬೇಸಿಗೆಯಲಿ ನೀರು ಹಾಕಿ
ಮಳೆಯಲಿ ಮರೆಮಾಡಿ
ವರ್ಷಪೂರ್ತಿ ಬೆಳೆಸಿ
ಬಿಟ್ಟ ಹೂವ ದಾರಿಯಲಿ
ಹೊಗುವವರು ಕಿತ್ತೊಯ್ದರೆಂದು
ಗೋಳಾಡಿದರಂತೆ.


------------<>------------
 

ಮನಸ್ಸೆಂಬ ಹಾರ್ಡ್ ಡಿಸ್ಕಿನಲ್ಲಿ
ಬೇಕಾದ್ದು, ಬೇಡವಾದ್ದು
ಸೇವಿಸಿಟ್ಟಿರುವೆ ಹುಟ್ಟಿನಿಂದ

ಶುರುವಾಗಿದೆ ಇತ್ತೇಚೆಗೆ
ನಡು ನಡುವೆ ಹ್ಯಾಂಗ್ ಆಗಲು
ಸ್ಟೋರೇಜ್ ಕೊರತೆ ಇಂದ

ಆಗಲೇ ಬೇಕಿದೆ
ಒಂದು ಫಾರ್ಮಾಟ್ ...
ಕಿತ್ತೊಗೆಯಬೇಕಿದೆ
ಕಷ್ಟ ದುಃಖಗಳೆಂಬ ವೈರಸ್ ಗಳ
ಉಳಿಸಿಕೊಳ್ಳಬೇಕಿದೆ
ಸಿಹಿನೆನಪಿನ ಫೈಲ್ ಗಳ
ತೆಗೆದಿಟ್ಟು ಬ್ಯಾಕಪ್.

------------<>------------
 
ಹಗಲೆಲ್ಲ 

ಸೂರ್ಯನ 
ಭಯದಿಂದ 
ಓಡುವ 
ಆ ಮೊಡಗಳು
ಸಂಜೆಯಾಗುತ್ತಿದ್ದಂತೆ
ಭುವಿಯ ಸೇರುತ್ತವೆ
ತುಂತುರು ಮಳೆಯಾಗಿ
ಕಳ್ಳ ಪ್ರೇಮಿಯಂತೆ

------------<>------------

ಹಗಲು ಮೋಡದ ಮರೆಯಲ್ಲಿ
ಸೂರ್ಯನ ಕಣ್ಣಾಮುಚ್ಚಾಲೆ ಆಟ

ರಾತ್ರಿ ಕತ್ತಲ ಮರೆಯಲ್ಲಿ 
ಸರ್ಕಾರದ ಪವರ್ ಕಟ್ ಕಾಟ

------------<>------------

ವರ್ಷ ಪೂರ್ತಿ 
ಬಿಸಿಲಿಗೆ ಸುಡದ ಮರಕ್ಕೆ 
ಒಂದು ಸಿಡಿಲು.

------------<>------------



ನಮ್ಮ ಮನೆ

ತುಂಬು ಹಸಿರಾಗಿರುವ ಸುಂದರ ಮರದ ರೆಂಬೆ 
ಅಲ್ಲಿ ಇಲ್ಲಿ ಹೆಕ್ಕಿತಂದ ಕಸ ಕಡ್ಡಿ ನಾರು
ಬೂರುಗನ ಮರದಿಂದ ಉದುರಿದ ಹತ್ತಿ 
ಇದೇ ನಮ್ಮ ಮನೆ 

ದಿನವೆಲ್ಲ ತಂಪಾದ ಗಾಳಿ, ಬೆಳಕು
ನೋಡ ಬೇಕಿಲ್ಲ ದಿಕ್ಕು, ವಾಸ್ತು
ಬರಲಿ ಎಷ್ಟಾದರೂ ನೆಂಟರು ಇಷ್ಟರು ನಮಗಿಲ್ಲ ಸುಸ್ತು
ಇದೇ ನಮ್ಮ ಮನೆ

ಅವರಿವರ ಜಾಗವೆಂಬ ಹಂಗಿಲ್ಲ
ಹುಟ್ಟಿದರು ನಾಲ್ಕಾರು ಮಕ್ಕಳು ಜಗಳವಿಲ್ಲ
ವರುಷಕೊಂದು ಮರ, ವರ್ಷಕೊಂದು ಊರು
ಇದೇ ನಮ್ಮ ಮನೆ


------------<>------------

ಅಂದು

ನೀ ಮುಡಿದಾ
ಮಲ್ಲಿಗೆ ಕಂಪು
ಸೆಳೆಯಿತು ನನ್ನ

ನಿನ್ನ ಗೆಜ್ಜೆಯ
ಸದ್ದಿಗೆ ಕದಡಿತು
ನನ್ನ ಮನ

ಇಂದು

ನಿನ್ನ ಕೆದರಿದಾ
ತಲೆ ಕೂದಲು
ಹೆದರಿಸಿತು ನನ್ನ

ನಿನ್ನ ಕಾಲಿನ
ಹೈ ಹೀಲ್ಡು
ಮುರಿದೀತು ನಿನ್ನ ಬೆನ್ನ


------------<>------------

ಓ ಕಾಲವೇ
ಕರೆದುಕೊಂಡು ಹೋಗೆನ್ನನು
ನೆನಪುಗಳ ಆಳಕೆ

ಬೆಳಗನ ಜಾವಾದಿ
ಗದ್ದೆ ಅಂಚಿನಲ್ಲಿ 
ಓಡುತಿದ್ದ ಆ ಕ್ಷಣಕೆ

ಮಧ್ಯಾನ್ಹ ಹಸಿವಾದಾಗ
ಹಣ್ಣ ಕೊಡುತಿದ್ದ
ಪೇರಳೆ ಗಿಡದ ಬುಡಕೆ

ತೋಟದಿ ಸುತ್ತುತ,
ಅಡಿಕೆ ಮರವ ನೋಡುತಾ
ಜಾರಿ ಬಿದ್ದಾ ಜಾಗಕೆ

ಸಂಜೆಯಾ ಹೊತ್ತಲಿ
ಗುಡ್ದದಾ ಬುಡದಲ್ಲಿ
ಚಿನ್ನಿಕೋಲು ಆಡಿದಾ ದಿನಕೆ

ಪ್ರತಿಯೊಂದು ಚಿತ್ರ ವಿಚಿತ್ರವನು
ಬೆರಗುಗಣ್ಣಿನಿಂದಾ ನೋಡುತ್ತಿದ್ದ
ನನ್ನಯಾ ಆ ಬಾಲ್ಯಕೆ


------------<>------------

ಸಿಹಿ ನೆನಪುಗಳು
ಕತ್ತಲ ಹಾದಿಯಲ್ಲಿ ಬೆಳಕು ಚೆಲ್ಲುವ
ಮಿಂಚು ಹುಳುಗಳಂತೆ


------------<>------------

ಮನೆಯಲಿ ಇಲ್ಲದಿದ್ದರೂ ಕುಕ್ಕಿಂಗ್ ಗ್ಯಾಸ್
ಕಣ್ಣಿಗೆ ಬೇಕು ಕೂಲಿಂಗ್ ಗ್ಲಾಸ್

ಅಡುಗೆಗೆ ಇಲ್ಲದಿದ್ದರೂ ರೇಷನ್
ಮುಖಕ್ಕೆ ಬೇಕು ಲೋಷನ್

ದೀಪ ಹಚ್ಚಲು ಇಲ್ಲದಿದ್ದರೂ ಮ್ಯಾಚ್ ಸ್ಟಿಕ್
ತುಟಿಗೆ ಬೇಕು ಲಿಪ್ ಸ್ಟಿಕ್

ತರುವುದು ಇಲ್ಲ ಹಾಲು ಎವೆರಿಡೆ
ಕುಡಿಯಲು ಬೇಕು ಕಾಫಿ ಡೇ

ಅರಿಯರು ಇವರು ಅಕ್ಕಿಯ ರೇಟು
ಸೇದಲು ಬೇಕು ಸಿಗರೇಟು

ಬ್ಯಾಲೆನ್ಸ್ ಇರುವುದಿಲ್ಲ ಮಾಡಲು ಫೋನ್
ತೋರಿಕೆಗೆ ಬೇಕು ಸ್ಮಾರ್ಟ್ ಫೋನ್

ಓದಿನಲ್ಲಿ ಇವರದ್ದು ನಾಯಿ ಪಾಡು
ಆಡಲು ಬೇಕು ಐ ಪ್ಯಾಡ್

ಹಾಕರು ಇವರು ತಲೆಗೆ ಕೂದಲಿಗೆ ಬೆಂಡು
ಡ್ರಾಪ್ ಕೊಡಲು ಬೇಕು ದಿನಕ್ಕೊಬ್ಬ ಫ್ರೆಂಡ್


------------<>------------

ಹೀಗೇಕೆ?

ಹಸಿದಿಹುದು ಹೊಟ್ಟೆ
ಹರಿದಿಹುದು ಬಟ್ಟೆ
ಆದರೂ ಮಾಸುವುದಿಲ್ಲ ನಗುವು

ಊಟಕೆ ಹೋಟೆಲ್
ನೀರಿಗೆ ಬಾಟಲ್
ಆದರೂ ಮುಖದಲ್ಲಿಲ್ಲ ನಲಿವು

ಬರೆಯಲು ಇಲ್ಲ ಪುಸ್ತಕ
ನೋಡಿಕೊಂಡಿಲ್ಲ ಮಸ್ತಕ
ಕೆಲಸಕ್ಕೆ ಎಂದೂ ಅಂಜೊಲ್ಲ

ಆಡಲಿದೆ ಗ್ಯಾಲಕ್ಸಿ ನೋಟು
ಮಲಗಲಿಕ್ಕೆ ಕಾಟು
ಕೆಲಸಕ್ಕೆ ಬೆನ್ನು ಬಗ್ಗೋಲ್ಲ

ತಲೆಯ ಮೇಲಿಲ್ಲ ಸೂರು
ಮನೆಗೆ ಬರದಲ್ಲ ನೀರು
ಎಂದೆಂದೂ ಕೊರಗುವುದಿಲ್ಲ ನಾವು

ಓಡಾಡಲು ಕಾರು
ಕುಡಿಯಲು ಬೇಕು ಬಾರು
ಪ್ರತಿದಿನ ಲೋಚಗುಟ್ಟುವಿರಲ್ಲ ನೀವು


------------<>------------

ಕ್ಷಣಕಾಲ ಯೋಚಿಸಿ

ಚಳಿಗಾಲ ಮುಗಿದು ಸುಡು ಬೇಸಿಗೆ ಬರುತಿಹುದು
ನೀರೆಲ್ಲಾ ಮುಗಿದು ತಡಕಾಡುವ ಪಾಡು ಹೇಗಿರಬಹುದು

ಮನೆಯಲ್ಲಿರಲಿ ಬಾತ್ ಟಬ್, ಷವರ್ ಎನ್ನುತಾರೆ ಕೆಲವರು
ಬೊಗಸೆ ನೀರಿಗೂ ಮೈಲಿ ದೂರ ನಡೆಯುತಾರೆ ಇವರು

ಅರ್ದಕುಡಿದ ಬಿಸ್ಲೇರಿ ಎಸೆಯುವರು ಎಲ್ಲೆಂದರಲ್ಲಿ
ದಾಹವಾದಾಗ ಬೊಗಸೆ ನೀರೂ ಸಿಗದು ಇವರಿಗಿಲ್ಲಿ

ಕೊಡಗಟ್ಟಲೆ ನೀರು ನೀವು ಸುರಿಯ ಬೇಡಿ
ಹನಿ ನೀರ ಬೆಲೆಯ ಇವರ ಕೇಳಿ ನೋಡಿ

ಹಸಿದವನಿಗೆ ಗೊತ್ತು ಅನ್ನದಾ ಬೆಲೆ
ಬಾಯರಿದವನಿಗೆ ಗೊತ್ತು ನೀರಿನಾ ಬೆಲೆ


------------<>------------

ಹೊಳೆಯುವ ಅರ್ಧ ಚಂದ್ರನ
ಹಿಂದೆ ಹೋದವ ಕವಿಯಾದ
ಉಳಿದರ್ಧವ ಹುಡುಕಲು
ಹೊರಟವ ವಿಜ್ಞಾನಿಯಾದ


------------<>------------

ಕೋಪಿಸಿ ಕೊಂಡಾಗ
ಅವಳ ಮುಖದ ಕೆಂಪು
ಸಂಜೆಯ ಸೂರ್ಯನೊಂದಿಗೆ
ಪೈಪೋಟಿಗೆ ಇಳಿದಿದೆ.


------------<>------------

ಮೇಘಳ ಕಣ್ಣೀರಧಾರೆ
ಸೂರ್ಯನ ಬೀಳ್ಕೊಡುವ ಸಮಯದಿ
ಇರುಳ ಕಾಮನಬಿಲ್ಲು


------------<>------------

ಬಿದ್ದ ಪೆನ್ನ ಎತ್ತಲು ಬಗ್ಗಿದೊಡೆ ನೀ ಕಾಡುವೆ
ಕಾಪಿ ಕುಡಿಯಲು ಎದ್ದರೂ ನೀ ಕಾಡುವೆ
ಪ್ರತಿ ಹೆಜ್ಜೆಯೂ ನಿನ್ನಿರುವ ನೆನಪಿಸುವೆ
ನೀನೇಕೆ ನನ್ನ ಹೀಗೆ ಕಾಡುವೆ ಬೆನ್ನು ನೋವೆ?


------------<>------------

ಆ ಬುದ್ಧನಷ್ಟು 
ಪ್ರಬುದ್ದನಾಗದಿದ್ದರು 
ಬೇಸರವಿಲ್ಲ
ಈ ಬುದ್ಧಿ ಜೀವಿಗಳಷ್ಟು 

ಬುದ್ದುವಾಗಬೇಡ

------------<>------------

ಆ ಒಂದು ಕ್ಷಣಕ್ಕೆ ಯಾವ್ದೋ ಒಂದು ಕಮಿಟ್ ಮೆಂಟ್ ಗೆ ಬಿದ್ದು ಆಮೇಲೆ ಅದೇ ಕೆಲವು ಸರಿ ಖುಷಿ / ಬೇಜಾರು ಮಾಡಿರತ್ವೆ.

ಸುಮಾರು ಒಂದು 7-8 ವರ್ಷದ ಹಿಂದೆ.... ಅವತ್ತು ಶನಿವಾರ ಆಫೀಸ್ ಅಲ್ಲಿ ಸ್ವಲ್ಪ ಕೆಲಸ ಇತ್ತು ಅಂತ ಹೋಗಿ ಅರೌಂಡ್ ಹನ್ನೊಂದು ಗಂಟೆ ಟೈಮ್ ಅಲ್ಲಿ ವಾಪಾಸ್ ಮನಗೆ ಬನ್ನೇರ್ಘಟ್ಟ ರೋಡ್ ಮೂಲಕ ಹೋಗ್ತಿದ್ದೆ. ನಂಗಿಂತ ಸ್ವಲ್ಪ ಮುಂದೆ ಒಬ್ಬ ಬೈಕ್ ಅಲ್ಲಿ ಹೋಗ್ತಾ ಇದ್ದ. ಅವ್ನ ಎದುರ್ಗೆ ಸಡನ್ ಆಗಿ ಇನ್ನೊಂದು ಬೈಕ್ ರೋಡ್ಗೆ ಅಡ್ಡ ಪಾಸ್ ಆಯ್ತು. ಇವ್ನು ಹೋಗಿ ಅವನಿಗೆ ಡಿಕ್ಕಿ ಕೊಟ್ಟೇ ಬಿಟ್ಟ ಇಬ್ರು ಬಿದ್ರು. ಸ್ವಲ್ಪ ಏಟು ಆಗಿತ್ತು ಇಬ್ರಿಗೂ. ನನ್ನ ಬೈಕ್ ನ ಸೈಡ್ಗೆ ಹಾಕಿ ನಾನು ಇಳ್ಕೊನ್ಡು ಹೋದೆ. ಇಬ್ರನ್ನು ಎತ್ತಿ ಆಯಿತು. ಅವ್ರುಗಳದ್ದು ಯಥಾ ಪ್ರಕಾರ ನಿಂದು ತಪ್ಪು ನಿಂದು ತಪ್ಪು ಅಂತ ಜಗಳ ಸ್ಟಾರ್ಟ್ ಆಯಿತು. ಆ ರೋಡ್ ಕ್ರಾಸ್ ಮಾಡ್ತಾ ಇದ್ದವ್ನು ನೋಡಿದ್ರೆ ಅಲ್ಲೇ ಪಕ್ಕದ ಗ್ಯಾರೇಜ್ ಅಲ್ಲಿ ಕೆಲ್ಸ ಮಾಡೋವ್ನು. ಅವ್ನ ಕಡೆ ಇಂದ ಒಂದು ನಾಲ್ಕು ಐದು ಜನ ಬಂದ್ರು. ಅದರಲ್ಲೂ ಒಬ್ಬ ಅಂತು ಇವ್ನಿಗೆ ಹೊಡಿಯೋಕೆ ಕೈ ಎತ್ತಿದ್ದೂ ಆಯ್ತು. ಅಷ್ಟೊತ್ತಿಗೆ ಅಲ್ಲೇ ಇದ್ದ ನಾನು ಕೈ ಅಲ್ಲಿ ಹೆಲ್ಮೆಟ್ ಇತ್ತು ಅದನ್ನ ಎತ್ತಿ ಹೇಳ್ದೆ ಯಾರು ಅವನ ಮೈ ಮುಟ್ ಬೇಡಿ ಇಲ್ಲಿ ಇರ್ಬದ್ದು ಮಿಸ್ಟೇಕ್ ಇದೆ ಯಾರು ಬೇಕಾದರು ಕಂಟ್ರೋಲ್ ಮದ್ಬೊದಿತ್ತು ಆದ್ರೆ ಸ್ಪೀಡ್ ಅಲ್ಲಿದ್ದಿದ್ರಿಂದ ಇಬ್ರಿಗೂ ಆಗಿಲ್ಲ ಸೊ ಇಬ್ರು ಅವರವ್ರ ಬೈಕ್ ರೆಪೇರಿ ಮಾಡಿಸ್ಕೊಳ್ರಿ ಅಂತ... ಅದುಕ್ಕೆ ಅಲ್ಲಿದ್ದವನೊಬ್ಬ ಅದಾಗಲ್ಲ ಇವ್ನು ಅವ್ನ ಗಾಡಿ ರೆಪೇರಿ ಮಾಡ್ಸಿ ಕೊಡ್ಲಿ ಅವ್ನು ಇವ್ನ ಗಾಡಿ ರೆಡಿ ಮಾಡಿ ಕೊಡ್ತಾನೆ ಅಂತ ಹೇಳ್ದ ಇಬ್ರು ಒಪ್ಪಿದ್ರು.

ಸರಿ ನಾನು ಹೊರಡ್ತೀನಿ ಅನ್ನೋ ಹೊತ್ತಿಗೆ ಆ ಗಾಡಿ ಓಡಿಸ್ತ ಇದ್ದ ಹುಡುಗ ನೀವು ಇರಿ ಸರ್ ಜೊತೆಗೆ ಇಲ್ಲ ಅಂದ್ರೆ ಇವ್ರು ಹೊಡ್ದು ಗಿಡ್ಡು ಬಿಟ್ರೆ ಅಂದ. ನಂಗು ಹೌದು ಪಾಪ ನೋಡೋಕೆ ಇನ್ನು ಚಿಕ್ಕ ಕಾಲೇಜ್ ಹುಡುಗ ಅನ್ಸ್ತು. ಜೊತೆಗೆ ಅರ್ ವಿ ಕಾಲೇಜ್ ಗೆ ಹೋಗ್ತಾ ಇದ್ದೀನಿ ಯಾವ್ದೋ ಎಗ್ಜಾಮ್ ಇದೆ ಒಂದು ಗಂಟೆಗೆ ಲೇಟ್ ಆಗತ್ತೆ ಅಂತಬೇರೆ ಹೇಳ್ದ. ಇಬ್ರು ಹತ್ತು ಹದಿನೈದು ನಿಮ್ಷ ಗಾಡಿ ರೆಪೇರಿ ಅಗೋಗಿ ಬಿಡತ್ತೆ ಅಂತ ಅವ್ನ ಗ್ಯಾರೇಜ್ ಗೆ ಹೋಗಿ ನಿಂತಾಯ್ತು, ಅವ್ರು ಹೋಗಿ ಅದು ಹೋಗಿದೆ ಇದು ಹೋಗಿದೆ 500 ರುಪಾಯಿ ಆಗತ್ತೆ ಕೊಡು ಅಂತ ಕೇಳಿದ್ರು ಇವ್ನು ಜೇಬು ಎಲ್ಲ ತಡಕಾಡ್ದ ಪರ್ಸ್ ಹೊರಗ್ ತೆಗ್ದ ಏನು ಮಾಡಿದ್ರು ನೂರ ಇಪ್ಪತ್ತು ರುಪಾಯಿ ಇತ್ತು ಅವ್ನತ್ರ, ಫ್ರೆಂಡ್ಸ್ ಗೆ ಫೋನ್ ಮಾಡ್ದ, ಮನೆಗೆ ಅಮ್ಮಂಗೆ ಅಂತ ಫೋನ್ ಮಾಡ್ದಾ ಯಾರು ಬರೋದು ಇಲ್ಲ ಅನ್ನಿಸ್ತು ನಂಗೆ... ಏನಪ್ಪಾ ಅಂತ ಕೇಳ್ದೆ ಸರ್ ಫ್ರೆಂಡ್ಸ್ ಕಾಲೇಜ್ ಹತ್ರ ಇದಾರೆ, ಜೊತೇಲಿ ದುಡ್ಡು ಬೇರೆ ಇಲ್ಲ ಏನ್ ಮಾಡ್ಬೇಕು ಗೊತ್ತಾಗ್ತಾ ಇಲ್ಲ, ಇವ್ರು ದುಡ್ಡು ಇಲ್ಲಾ ಅಂದ್ರೆ ಬಿಡಲ್ಲ ಸಾಯ್ಸಿ ಬಿಡ್ತಾರೆ. ಪರೀಕ್ಷೆಗೆ ಬೇರೆ ಹೋಗ್ ಬೇಕು ಅಂತೆಲ್ಲ ಬಡಬಡಿಸೋಕ್ ಶುರು ಮಾಡ್ದ... ಆಮೇಲೆ ಸರ್ ಐನೂರ್ ರುಪಾಯಿ ಇದ್ರೆ ಕೊಟ್ಟಿರಿ ಸರ್ ಎಗ್ಜಾಮ್ ಮುಗ್ದ ಕೂಡ್ಲೆ ನಿಮ್ಮ ಮನೆಗೆ ತಂದು ಕೊಡ್ತೀನಿ ಅಂದ. ನನ್ನ ಫೋನ್ ನಂಬರ್ ತಗೋಳಿ ಅಂದ, ID ಕಾರ್ಡ್ ಬೇರೆ ತೋರಿಸ್ದ, ಸರಿ ಪಾಪ ಅಂತ ಕೊಟ್ಟೆ. ಅವ್ನ ಗಾಡಿ ರೆಪೇರಿ ಆಯಿತು. ಹೋಗೋಣ್ವಾ ಸರ್ ಅಂದ. ಮತ್ತೆ ಸರ್ ನೀವ್ ಗಾಡಿ ನಿಲ್ಸಿ ಇಷ್ಟೊತ್ತು ಜೊತೆಗಿದ್ದು ಹೆಲ್ಪ್ ಮಾಡಿದ್ದಕ್ಕೆ ಥ್ಯಾಂಕ್ಸ್ ಅಂದ. ಸರಿ ಅಂತ ಮನ್ಗೆಗೆ ಹೊರ್ಟೆ. ಅವತ್ತು ಸಂಜೆ ಆಯಿತು... ಒಂದು ದಿನ ಕಳೀತು.. ಎರಡು ದಿನ ಕಳೀತು ಅವ್ನು ಬರ್ಲಿಲ್ಲ ದುಡ್ಡು ಕೊಡ್ಲಿಲ್ಲ. ನಾಲ್ಕು ದಿನ ಆದ್ಮೇಲೆ ಫೋನ್ ಮಾಡಿ ನೋಡೋಣ ಅಂತ ಫೋನ್ ಮಾಡಿದ್ರೆ ಅವ್ನು ಫೋನ್ ಕೂಡ ಎತ್ಲಿಲ್ಲ ನಾಲ್ಕಾರು ಸರಿ ಟ್ರೈ ಮಾಡಿ ನೋಡ್ದೆ ಇಲ್ಲ ಅವ್ನು ಫೋನ್ ಎತ್ಲೇ ಇಲ್ಲ. ಲ್ಯಾಂಡ್ ಲೈನ್ ಇಂದಾ ಫೋನ್ ಮಾಡ್ದೆ ಅವಾಗ ಫೋನ್ ಎತ್ತಿ ಯಾರು ಅಂತ ಕೇಳ್ದ ನನ್ನ ಹೆಸ್ರು ಗುರ್ತು ಹೇಳಿದ್ ಕುಡ್ಲೆ ಕಟ್ ಮಾಡೋದ ಅವ್ನು. ತುಂಬಾ ಬೇಜಾರ್ ಆಯಿತು. ನಾನು ಯಾಕೆ ಗಾಡಿ ನಿಲ್ಸಿ ಹೆಲ್ಪ್ ಮಾಡ್ದೆ ಅನ್ನಿಸ್ತು. ಆ ಒಂದು ಕ್ಷಣ ನಾನು ಗಾಡಿ ನಿಲ್ಲಿಸ್ದೆ ಇದ್ದಿದ್ರೆ ಎನಾಗ್ತಿತ್ತೋ ಗೊತ್ತಿಲ್ಲ.

ನಂಗೆ ಅವತ್ತಿಂದ ಮೇಲೆ ಯಾರಾದ್ರು ಸಣ್ಣ ಪುಟ್ಟ ಆಕ್ಸಿಡೆಂಟ್ ಮಾಡ್ಕೊಂಡು ಜಗಳ ಮಾಡ್ತಿದ್ರೆ ಗಾಡಿ ನಿಲ್ಸೋಕೆ ಮನ್ಸು ಬರಲ್ಲ. ಒಂದು ಕಡೆಯಿಂದ ಟೈಮು ವೇಸ್ಟು... ಇನ್ನೊಂದು ಕಡೆಯಿಂದ ದುಡ್ಡೂ ಹೋಯ್ತು.