Tuesday, June 3, 2014

ಒಂದಿಷ್ಟು ಟೈಮ್ ಪಾಸ್

ಕೈಗಳು ಚಾಚುತಿವೆ
ಮಳೆಹನಿಗಳಿಂದ ತುಂಬಿದ
ಎಲೆಗಳನು ಸ್ಪರ್ಶಿಸಲು.

ಕಾಲುಗಳು ಕೇಳುತಿದೆ
ಕೆಸರು ಗದ್ದೆಯಾ ...
ಅಂಚಿನಲ್ಲಿ ಓಡಾಡಲು.

ಕಣ್ಣುಗಳು ಮಿನುಗುತಿವೆ
ಗುಡ್ಡದ ನೀರಿನ ಝರಿಯ
ಸೌನ್ದರ್ಯವ ತುಂಬಿಕೊಳ್ಳಲು.

ಕಿವಿಗಳು ನಿಮಿರುತಿವೆ
ಮುಸ್ಸಂಜೆ ಬಿಬ್ಬರಿ
ಕೂಗುವಾ ಸದ್ದನಾಲಿಸಲು.

ಮೂಗು ಕಾತರಿಸುತಿದೆ
ಅಂಗಳದ ಕಸ್ತೂರಿ
ಮಲ್ಲಿಗೆಯ ಪರಿಮಳಕ್ಕಾಗಿ.

ನಾಲಿಗೆಯು ಕಾಯುತಿವೆ
ಹಲಸಿನ ಹಣ್ಣಿನ
ಬಿಸಿಬಿಸಿ ಮುಳುಕಕ್ಕಾಗಿ.
 
 
 












------------<>------------

 
ಅದೇನು ನಾಚಿಕೆಯೋ
ನಿನಗೆ ನಾನರಿಯೆ
ತುದಿ ಬೆರಳ ಒಂದು ಸ್ಪರ್ಶಕ್ಕೇ
ನಾಚಿ ಮುದುಡುವ ನೀನು
ಲಜ್ಜೆಯಲ್ಲಿ ನಲ್ಲೆಯನ್ನೇ
ಮೀರಿಸುವೆಯಲ್ಲೇ


------------<>------------

 
ಉಕ್ಕಿ ಹರಿವ ನದಿಗೆ
ಯಾವ ಹಂಗಿಲ್ಲ
ಕೊಂಡೊಯ್ಯುತ್ತದೆ
ತನ್ನೊಡಲಲ್ಲಿ ತುಬಿಕೊಂಡು
ಕಡ್ಡಿ ಕಸ ಕಲ್ಲು ಮಣ್ಣು

ಮುಗ್ಗರಿಸಿದ ಮೇಲೇ
ಅರಿವಾದದ್ದು ಅವನಿಗೆ
ಪ್ರೀತಿಯೊಂದು
ಹುಚ್ಚು ಹೊಳೆ ಎಂದು
 
 


------------<>------------

ಆಷಾಢದಿ
ಮೋಡದ ಮರೆಯಲಿ
ಭುವಿಯ ಕಾಣದೆ
ಒಂಟಿ ಚಂದ್ರನ  ಕಂಬನಿ

------------<>------------

ಪಕ್ಕದೂರಿನಿಂದ
ಕದ್ದು ತಂದ ಗಿಡಕೆ
ಬೇಸಿಗೆಯಲಿ ನೀರು ಹಾಕಿ
ಮಳೆಯಲಿ ಮರೆಮಾಡಿ
ವರ್ಷಪೂರ್ತಿ ಬೆಳೆಸಿ
ಬಿಟ್ಟ ಹೂವ ದಾರಿಯಲಿ
ಹೊಗುವವರು ಕಿತ್ತೊಯ್ದರೆಂದು
ಗೋಳಾಡಿದರಂತೆ.


------------<>------------
 

ಮನಸ್ಸೆಂಬ ಹಾರ್ಡ್ ಡಿಸ್ಕಿನಲ್ಲಿ
ಬೇಕಾದ್ದು, ಬೇಡವಾದ್ದು
ಸೇವಿಸಿಟ್ಟಿರುವೆ ಹುಟ್ಟಿನಿಂದ

ಶುರುವಾಗಿದೆ ಇತ್ತೇಚೆಗೆ
ನಡು ನಡುವೆ ಹ್ಯಾಂಗ್ ಆಗಲು
ಸ್ಟೋರೇಜ್ ಕೊರತೆ ಇಂದ

ಆಗಲೇ ಬೇಕಿದೆ
ಒಂದು ಫಾರ್ಮಾಟ್ ...
ಕಿತ್ತೊಗೆಯಬೇಕಿದೆ
ಕಷ್ಟ ದುಃಖಗಳೆಂಬ ವೈರಸ್ ಗಳ
ಉಳಿಸಿಕೊಳ್ಳಬೇಕಿದೆ
ಸಿಹಿನೆನಪಿನ ಫೈಲ್ ಗಳ
ತೆಗೆದಿಟ್ಟು ಬ್ಯಾಕಪ್.

------------<>------------
 
ಹಗಲೆಲ್ಲ 

ಸೂರ್ಯನ 
ಭಯದಿಂದ 
ಓಡುವ 
ಆ ಮೊಡಗಳು
ಸಂಜೆಯಾಗುತ್ತಿದ್ದಂತೆ
ಭುವಿಯ ಸೇರುತ್ತವೆ
ತುಂತುರು ಮಳೆಯಾಗಿ
ಕಳ್ಳ ಪ್ರೇಮಿಯಂತೆ

------------<>------------

ಹಗಲು ಮೋಡದ ಮರೆಯಲ್ಲಿ
ಸೂರ್ಯನ ಕಣ್ಣಾಮುಚ್ಚಾಲೆ ಆಟ

ರಾತ್ರಿ ಕತ್ತಲ ಮರೆಯಲ್ಲಿ 
ಸರ್ಕಾರದ ಪವರ್ ಕಟ್ ಕಾಟ

------------<>------------

ವರ್ಷ ಪೂರ್ತಿ 
ಬಿಸಿಲಿಗೆ ಸುಡದ ಮರಕ್ಕೆ 
ಒಂದು ಸಿಡಿಲು.

------------<>------------



ನಮ್ಮ ಮನೆ

ತುಂಬು ಹಸಿರಾಗಿರುವ ಸುಂದರ ಮರದ ರೆಂಬೆ 
ಅಲ್ಲಿ ಇಲ್ಲಿ ಹೆಕ್ಕಿತಂದ ಕಸ ಕಡ್ಡಿ ನಾರು
ಬೂರುಗನ ಮರದಿಂದ ಉದುರಿದ ಹತ್ತಿ 
ಇದೇ ನಮ್ಮ ಮನೆ 

ದಿನವೆಲ್ಲ ತಂಪಾದ ಗಾಳಿ, ಬೆಳಕು
ನೋಡ ಬೇಕಿಲ್ಲ ದಿಕ್ಕು, ವಾಸ್ತು
ಬರಲಿ ಎಷ್ಟಾದರೂ ನೆಂಟರು ಇಷ್ಟರು ನಮಗಿಲ್ಲ ಸುಸ್ತು
ಇದೇ ನಮ್ಮ ಮನೆ

ಅವರಿವರ ಜಾಗವೆಂಬ ಹಂಗಿಲ್ಲ
ಹುಟ್ಟಿದರು ನಾಲ್ಕಾರು ಮಕ್ಕಳು ಜಗಳವಿಲ್ಲ
ವರುಷಕೊಂದು ಮರ, ವರ್ಷಕೊಂದು ಊರು
ಇದೇ ನಮ್ಮ ಮನೆ


------------<>------------

ಅಂದು

ನೀ ಮುಡಿದಾ
ಮಲ್ಲಿಗೆ ಕಂಪು
ಸೆಳೆಯಿತು ನನ್ನ

ನಿನ್ನ ಗೆಜ್ಜೆಯ
ಸದ್ದಿಗೆ ಕದಡಿತು
ನನ್ನ ಮನ

ಇಂದು

ನಿನ್ನ ಕೆದರಿದಾ
ತಲೆ ಕೂದಲು
ಹೆದರಿಸಿತು ನನ್ನ

ನಿನ್ನ ಕಾಲಿನ
ಹೈ ಹೀಲ್ಡು
ಮುರಿದೀತು ನಿನ್ನ ಬೆನ್ನ


------------<>------------

ಓ ಕಾಲವೇ
ಕರೆದುಕೊಂಡು ಹೋಗೆನ್ನನು
ನೆನಪುಗಳ ಆಳಕೆ

ಬೆಳಗನ ಜಾವಾದಿ
ಗದ್ದೆ ಅಂಚಿನಲ್ಲಿ 
ಓಡುತಿದ್ದ ಆ ಕ್ಷಣಕೆ

ಮಧ್ಯಾನ್ಹ ಹಸಿವಾದಾಗ
ಹಣ್ಣ ಕೊಡುತಿದ್ದ
ಪೇರಳೆ ಗಿಡದ ಬುಡಕೆ

ತೋಟದಿ ಸುತ್ತುತ,
ಅಡಿಕೆ ಮರವ ನೋಡುತಾ
ಜಾರಿ ಬಿದ್ದಾ ಜಾಗಕೆ

ಸಂಜೆಯಾ ಹೊತ್ತಲಿ
ಗುಡ್ದದಾ ಬುಡದಲ್ಲಿ
ಚಿನ್ನಿಕೋಲು ಆಡಿದಾ ದಿನಕೆ

ಪ್ರತಿಯೊಂದು ಚಿತ್ರ ವಿಚಿತ್ರವನು
ಬೆರಗುಗಣ್ಣಿನಿಂದಾ ನೋಡುತ್ತಿದ್ದ
ನನ್ನಯಾ ಆ ಬಾಲ್ಯಕೆ


------------<>------------

ಸಿಹಿ ನೆನಪುಗಳು
ಕತ್ತಲ ಹಾದಿಯಲ್ಲಿ ಬೆಳಕು ಚೆಲ್ಲುವ
ಮಿಂಚು ಹುಳುಗಳಂತೆ


------------<>------------

ಮನೆಯಲಿ ಇಲ್ಲದಿದ್ದರೂ ಕುಕ್ಕಿಂಗ್ ಗ್ಯಾಸ್
ಕಣ್ಣಿಗೆ ಬೇಕು ಕೂಲಿಂಗ್ ಗ್ಲಾಸ್

ಅಡುಗೆಗೆ ಇಲ್ಲದಿದ್ದರೂ ರೇಷನ್
ಮುಖಕ್ಕೆ ಬೇಕು ಲೋಷನ್

ದೀಪ ಹಚ್ಚಲು ಇಲ್ಲದಿದ್ದರೂ ಮ್ಯಾಚ್ ಸ್ಟಿಕ್
ತುಟಿಗೆ ಬೇಕು ಲಿಪ್ ಸ್ಟಿಕ್

ತರುವುದು ಇಲ್ಲ ಹಾಲು ಎವೆರಿಡೆ
ಕುಡಿಯಲು ಬೇಕು ಕಾಫಿ ಡೇ

ಅರಿಯರು ಇವರು ಅಕ್ಕಿಯ ರೇಟು
ಸೇದಲು ಬೇಕು ಸಿಗರೇಟು

ಬ್ಯಾಲೆನ್ಸ್ ಇರುವುದಿಲ್ಲ ಮಾಡಲು ಫೋನ್
ತೋರಿಕೆಗೆ ಬೇಕು ಸ್ಮಾರ್ಟ್ ಫೋನ್

ಓದಿನಲ್ಲಿ ಇವರದ್ದು ನಾಯಿ ಪಾಡು
ಆಡಲು ಬೇಕು ಐ ಪ್ಯಾಡ್

ಹಾಕರು ಇವರು ತಲೆಗೆ ಕೂದಲಿಗೆ ಬೆಂಡು
ಡ್ರಾಪ್ ಕೊಡಲು ಬೇಕು ದಿನಕ್ಕೊಬ್ಬ ಫ್ರೆಂಡ್


------------<>------------

ಹೀಗೇಕೆ?

ಹಸಿದಿಹುದು ಹೊಟ್ಟೆ
ಹರಿದಿಹುದು ಬಟ್ಟೆ
ಆದರೂ ಮಾಸುವುದಿಲ್ಲ ನಗುವು

ಊಟಕೆ ಹೋಟೆಲ್
ನೀರಿಗೆ ಬಾಟಲ್
ಆದರೂ ಮುಖದಲ್ಲಿಲ್ಲ ನಲಿವು

ಬರೆಯಲು ಇಲ್ಲ ಪುಸ್ತಕ
ನೋಡಿಕೊಂಡಿಲ್ಲ ಮಸ್ತಕ
ಕೆಲಸಕ್ಕೆ ಎಂದೂ ಅಂಜೊಲ್ಲ

ಆಡಲಿದೆ ಗ್ಯಾಲಕ್ಸಿ ನೋಟು
ಮಲಗಲಿಕ್ಕೆ ಕಾಟು
ಕೆಲಸಕ್ಕೆ ಬೆನ್ನು ಬಗ್ಗೋಲ್ಲ

ತಲೆಯ ಮೇಲಿಲ್ಲ ಸೂರು
ಮನೆಗೆ ಬರದಲ್ಲ ನೀರು
ಎಂದೆಂದೂ ಕೊರಗುವುದಿಲ್ಲ ನಾವು

ಓಡಾಡಲು ಕಾರು
ಕುಡಿಯಲು ಬೇಕು ಬಾರು
ಪ್ರತಿದಿನ ಲೋಚಗುಟ್ಟುವಿರಲ್ಲ ನೀವು


------------<>------------

ಕ್ಷಣಕಾಲ ಯೋಚಿಸಿ

ಚಳಿಗಾಲ ಮುಗಿದು ಸುಡು ಬೇಸಿಗೆ ಬರುತಿಹುದು
ನೀರೆಲ್ಲಾ ಮುಗಿದು ತಡಕಾಡುವ ಪಾಡು ಹೇಗಿರಬಹುದು

ಮನೆಯಲ್ಲಿರಲಿ ಬಾತ್ ಟಬ್, ಷವರ್ ಎನ್ನುತಾರೆ ಕೆಲವರು
ಬೊಗಸೆ ನೀರಿಗೂ ಮೈಲಿ ದೂರ ನಡೆಯುತಾರೆ ಇವರು

ಅರ್ದಕುಡಿದ ಬಿಸ್ಲೇರಿ ಎಸೆಯುವರು ಎಲ್ಲೆಂದರಲ್ಲಿ
ದಾಹವಾದಾಗ ಬೊಗಸೆ ನೀರೂ ಸಿಗದು ಇವರಿಗಿಲ್ಲಿ

ಕೊಡಗಟ್ಟಲೆ ನೀರು ನೀವು ಸುರಿಯ ಬೇಡಿ
ಹನಿ ನೀರ ಬೆಲೆಯ ಇವರ ಕೇಳಿ ನೋಡಿ

ಹಸಿದವನಿಗೆ ಗೊತ್ತು ಅನ್ನದಾ ಬೆಲೆ
ಬಾಯರಿದವನಿಗೆ ಗೊತ್ತು ನೀರಿನಾ ಬೆಲೆ


------------<>------------

ಹೊಳೆಯುವ ಅರ್ಧ ಚಂದ್ರನ
ಹಿಂದೆ ಹೋದವ ಕವಿಯಾದ
ಉಳಿದರ್ಧವ ಹುಡುಕಲು
ಹೊರಟವ ವಿಜ್ಞಾನಿಯಾದ


------------<>------------

ಕೋಪಿಸಿ ಕೊಂಡಾಗ
ಅವಳ ಮುಖದ ಕೆಂಪು
ಸಂಜೆಯ ಸೂರ್ಯನೊಂದಿಗೆ
ಪೈಪೋಟಿಗೆ ಇಳಿದಿದೆ.


------------<>------------

ಮೇಘಳ ಕಣ್ಣೀರಧಾರೆ
ಸೂರ್ಯನ ಬೀಳ್ಕೊಡುವ ಸಮಯದಿ
ಇರುಳ ಕಾಮನಬಿಲ್ಲು


------------<>------------

ಬಿದ್ದ ಪೆನ್ನ ಎತ್ತಲು ಬಗ್ಗಿದೊಡೆ ನೀ ಕಾಡುವೆ
ಕಾಪಿ ಕುಡಿಯಲು ಎದ್ದರೂ ನೀ ಕಾಡುವೆ
ಪ್ರತಿ ಹೆಜ್ಜೆಯೂ ನಿನ್ನಿರುವ ನೆನಪಿಸುವೆ
ನೀನೇಕೆ ನನ್ನ ಹೀಗೆ ಕಾಡುವೆ ಬೆನ್ನು ನೋವೆ?


------------<>------------

ಆ ಬುದ್ಧನಷ್ಟು 
ಪ್ರಬುದ್ದನಾಗದಿದ್ದರು 
ಬೇಸರವಿಲ್ಲ
ಈ ಬುದ್ಧಿ ಜೀವಿಗಳಷ್ಟು 

ಬುದ್ದುವಾಗಬೇಡ

------------<>------------

No comments:

Post a Comment