Wednesday, June 18, 2014

ಶಾಮರಾಯರ ಮಗನು ಅಣ್ಣತಂಗಿಯಿಲ್ಲದ ಹುಡುಗ ಚಿನ್ನದಂತಹ ಹುಡುಗ ಊರಿಗೆಲ್ಲ
ಬಿಎಸ್ಸಿ ಎಂಎಸ್ಸಿ ಹೆಸರು ಸೀತಾರಾಮು ಮೂವತ್ತೈದು ತುಂಬಿಹುದು ಲಗ್ನವಿಲ್ಲ

ಅಣ್ಣತಂಗಿಯರಿಲ್ಲದ ಗಂಡು ಒಂಟಿಸಲಗವೋ ಗಂಡು ಹೆಣ್ಮಕ್ಳ ಕಣ್ಣಲ್ಲೇ ಕೊಲ್ಲುವವನು
ಮಡದಿಯನು ಕರೆತಂದು ಊಟ ಹಾಕಿಸುವನೆಂದು ಕಾದವರ ಸಾಲಲ್ಲಿ ನಮ್ಮ ಕನಸು
ಹತ್ತಿರದ ಹೊಳೆಯಲ್ಲಿ ಎತ್ತ ಮೈ ತೊಳೆಸಿ ಹೊಡಕೊಂಡು ಬರುವಾಗ ನೋಡಬೇಕು
ದನವನೋಡಿಸುವಾಗ ನಾಗರ ಬನದಬಳಿ ಅವನ ಹೆಂಡತಿ ಹೆಸರ ಕೇಳಬೇಕು

ಮೊನ್ನೆ ರಾಮಾಪುರದ ಶಂಕ್ರಯ್ಯನ ಮೊಮ್ಮಗಳ ನೋಡಲು ಹೋದ ಅವರ ಮನೆಗೆ
ರೈತರ ಮನೆಗಳಲಿ ಕೆಲಸ ಜಾಸ್ತಿಯಿರುವುದು ನೋ ಎಂದಳು ಹುಡುಗಿ ರೂಮಿನೊಳಗೆ 
ಅವಳ ಮಾತನು ಕೇಳಿ ಬೇಸರಿಸಿಕೊಂಡನು ರಾಮು ಹೃದಯದಲಿ ಆಸೆ ಕಮರಿ ಹೋಗಿ
ಮುಂಜಾನೆ ಟೀವಿಯಲಿ ನುಡಿದುದು ಭವಿಷ್ಯ ಮಾಡವುದೇನು ಹೊರಟನು ಮನೆಗೆ ಹಿಂತಿರುಗಿ

ಸಂಜೆ ಅಂಗಡಿಯಲಿ ನನ್ನ ತಮ್ಮನ ಬಳಿ ಮಾಣಿ ಹೇಳಿದನಂತೆ ಕಾರಣವನು
ಸಾಫ್ಟ್ ವೇರ್ ಕಂಪನಿಯಲಿ ಕೆಲಸ ಮಾಡುವ ಹುಡ್ಗ ಅವಳಿಗೆ ಪ್ರೀತಿ ಎಂದು 
ಕುಡಿತ ಸಿಗರೇಟು ಪಾನ್ ಅಭ್ಯಾಸವಿಲ್ಲದ ಹುಡುಗನನು ಬಿಟ್ಟಿದ್ದೇಕೆ ಆ ಪೆದ್ದು ಹೆಣ್ಣು
ಬೆಂಗಳೂರ ಕಿಷ್ಕಿಂದೆಯ ಮನೆಗಳೇ ಹೇಳುವುವು ಅಲ್ಲಿ ಜಾಸ್ತಿದಿನ ನೀರುಸಿಕ್ಕುವುದಿಲ್ಲ ಎಂದು

ಶಾಮರಾಯರ ಮಗನು ಚಿನ್ನದಂತಹ ಹುಡುಗ ಹುಡುಗಿ ಸಿಕ್ಕದಿದ್ದರೂ ಕಷ್ಟವಿಲ್ಲ
ದಾವಣಗೆರೆಯ ಹೆಣ್ಣು ಕೊಡಿಸಿದರೂ ತುಂಬಿಸುವನಂತೆ ಜೇಬು ಯಾವ್ದೇ ಮುಚ್ಚು ಮರೆಯಿಲ್ಲ

(ಕೆ.ಎಸ್. ನರಸಿಂಹಸ್ವಾಮಿಯವರ ಕ್ಷಮೆ ಕೋರುತ್ತಾ) 

No comments:

Post a Comment