Monday, July 14, 2014

ಮತ್ತೆ ಸುರಿಯುತಿದೆ ಮಳೆ

ಮತ್ತೆ ಸುರಿಯುತಿದೆ ಮಳೆ
ದೋ ಎಂದು ಅಲ್ಲಿ
ಬರೀ ಫೋನಿನಲ್ಲೇ
ಎಲ್ಲಾ ವರ್ಣನೆ...

ಎಷ್ಟು ಮೆಟ್ಟಿಲು ಮುಚ್ಚಿದೆ?
ಹತ್ತಿದೆಯಾ ಸೇತುವೆ ಮೇಲೆ?
ಅನೆಗುಂದದಲ್ಲಿ
ಎಷ್ಟು ನೀರು ಬಂದಿದೆ?
ಕಾವಡಿಯಲಿ ಮೋರಿ ಕಟ್ಟಿದೆಯಾ?

ಬಟ್ಟರ ತೋಟಕ್ಕೆ
ನೀರು ನುಗ್ಗಿದೆಯಂತೆ
ನಾಗೆಗೌಡರ ಎಮ್ಮೆ
ಕೊಚ್ಚಿಕೊಂಡು ಹೋಯ್ತನೆ
ತಮ್ಮಯ್ಯನ ಸಸಿಯೆಲ್ಲ
ಕೊಳೆತು ಹೋಯ್ತನೆ
ರಾಮಣ್ಣನ ಕೊಟ್ಟಿಗೆಗೆ
ಧರೆ ಉರಿಳಿತಂತೆ

ಉಪ್ಪರಿಗೆ ಮಾಡು
ಸೋರುತಿದೆಯಂತೆ...
ಹಲಸಿನ ಹಪ್ಪಳ
ಒಣಗಿಲ್ಲವಂತೆ...
ಒಗೆದಿದ್ದ ಬಟ್ಟೆ ಬರಿ
ತಂಡಿ ತಂಡಿಯಂತೆ...
ನಾಲ್ಕು ದಿನ ಆಯ್ತು
ಕರೆಂಟ್ ಬರಲಿಲ್ಲವಂತೆ...
ಔಷಧಿ ಹೊಡಿಯೋಕೆ
ಜನ ಸಿಗುತಿಲ್ಲವಂತೆ...

ಬೆಂಗಳೂರ ರಂಗ
ಬಂದಿದ್ದನಂತೆ
ಹಲಸಿನ ಮುಳಕ
ಬೇಕೆಂದನಂತೆ
ಕಾಡು ಕೆಸುವಿನ
ಪತ್ರೊಡೆ ಮಾಡಿದ್ದರಂತೆ
ದಿಂಡಿನ ಗೊಜ್ಜು
ಚೆನ್ನಾಗಿತ್ತಂತೆ

ಫೋನ್ ಕಟ್ ಮಾಡೋ ಹೊತ್ತಿಗೆ
ಹೊಟ್ಟೆ ಒಂದೇ ಸಮ ಹಸಿವು ಮಾರ್ರೆ...



No comments:

Post a Comment